ತಿಟ್ಟುಸಿರು -
	ಫುಫ್ಫುಸಗಳಲ್ಲಿ ರಕ್ತದ ಅನಿಲವಿನಿಮಯಕ್ಕೆ ತೀವ್ರ ಅಡ್ಡಿ ಉಂಟಾಗುವುದರಿಂದ ಫಲಿಸುವ ಸ್ತಬ್ಧಪ್ರಾಣಸ್ಥಿತಿ (ಸಸ್‍ಪೆನ್‍ಡೆಡ್ ಆ್ಯನಿಮೇಷನ್) ಅಥವಾ ಮಾರಕಸ್ಥಿತಿ. ಪರ್ಯಾಯನಾಮಗಳು ಶ್ವಾಸಬಂಧನ, ಉಸಿರುಕಟ್ಟುವಿಕೆ, ಪಾಶ್ಚಾತ್ಯವೈದ್ಯದಲ್ಲಿ ಇದಕ್ಕೆ ಆ್ಯಸ್‍ಫಿಕ್ಸಿಯ ಎಂದಿದ್ದಾರೆ.  ಹಠತ್ತಾಗಿ ಎದೆಯ ಮೇಲೆ ಆಗಾಧಹೊರೆ ಬಿದ್ದು ಅವುಕಿದಂತಾಗುವುದು.  ಮೂಗುಬಾಯಿಗಳನ್ನು ಬಂಧಿಸುವುದು. ಹಿಸುಕುವುದು.  ಘನವಸ್ತುಗಳ ಗಂಟಲಿನಲ್ಲಿ ಸಿಕ್ಕಿ ಹಾಕಿಕೊಳ್ಳುವುದು, ದ್ರವಪದಾರ್ಥಗಳನ್ನು ನುಂಗಿದಾಗ ಅವು ಅನ್ನನಾಳದೊಳಕ್ಕೆ ಹೋಗೆ ಅಕಸ್ಮಾತಾಗಿ ಇಲ್ಲವೇ ಯಾವುದೋ ನಿರ್ಬಂಧದಿಂದ ಶ್ವಾಸನಾಳದೊಳಕ್ಕೆ ಹೋಗುವುದು, ನೀರಿನಲ್ಲಿ ಮುಳುಗಿ ಹೋಗುವುದು.  ಇವುಗಳಿಂದ ಗಂಟಲಿನಲ್ಲಿ ಅಥವಾ ಶ್ವಾಸನಾಳಗಳಲ್ಲಿ ವಾಯು ಸಂಚಾರಕ್ಕೆ ಅಡಚಣೆ ಉಂಟಾಗಿ ಉಸಿರಾಟ ಕಷ್ಟಸಾಧ್ಯವಾಗಿ ಅಥವಾ ಸಾಧ್ಯವೇ ಇಲ್ಲದೆ ಹೋಗುವುದರಿಂದ ತಿಟ್ಟುಸಿರು ಪರಿಣಮಿಸುತ್ತದೆ.  ಮುಖದ ಮೇಲೆ ದಟ್ಟವಾಗಿ ಮುಸುಕುಹಾಕಿ ಶ್ವಾಸರೋಧ ಮಾಡಿದಾಗಲೂ ತೀರ ಸಣ್ಣ ಗುಹೆಯಲ್ಲಿ ಸಿಕ್ಕಿಕೊಂಡು ಬಿಟ್ಟ ಉಸಿರನ್ನೇ ಪುನಃ ಪುನಃ ತೆಗೆದುಕೊಳ್ಳುತ್ತಿರಬೇಕಾದಾಗಲೂ ಉಸಿರು ಕಟ್ಟುತ್ತದೆ.  ಹೊಗೆ ದೂಳು, ಘಾಟುಪದಾರ್ಥಗಳು, ಕಾರ್ಬನ್ ಮಾನಾಕ್ಸೈಡ್, ಕೋಲ್ ಗ್ಯಾಸ್ ಅಥವಾ ಇತರ ವಿಷಾನಿಲಗಳು ಸೇರಿದ ಮಾಯುವನ್ನು  ಉಸಿರಾಡಬೇಕಾಗಿ ಬಂದಾಗ ತಿಟ್ಟುಸಿರು ಉಂಟಾಗುವುದು ಸಾಮಾನ್ಯ.  ಗುಂಡಿಗೆಯ ಹಠಾತ್ ಕುಸಿತದಿಂದ ರಕ್ತಪರಿಚಲನೆಯೇ ನಿಂತುಹೋಗಿ ಶ್ವಾಸಬಂಧವಾಗುವುದು ವ್ಯಕ್ತ.  ಅಪಘಾತದಿಂದ ಶ್ವಾಸಕ್ರಮವನ್ನು ನಿಯಂತ್ರಿಸುವ ಮಿದುಳಿನ ಭಾಗಕ್ಕೆ ಏಟುಬಿದ್ದಾಗ ಇಲ್ಲವೇ ವಿದ್ಯುದಾಘಾತ, ಪೋಲಿಯೋ ರೋಗ ಇವುಗಳಿಂದ ಉಸಿರಾಟದಲ್ಲಿ ಭಾಗವಹಿಸುವ ಸ್ನಾಯುಗಳ ಕ್ರಿಯೆಗೆ ಧÀಕ್ಕೆ- ಉಂಟಾದಾಗ ಉಸಿರಾಟ ನಿಂತು ಹೋಗಬಹುದುÀ.  ಶಸ್ತ್ರಕ್ರಿಯೆಗಾಗಿ ಜ್ಞಾನತಪ್ಪಿಸಲು ಬಳಸುವ ಕ್ಲೋರೊ ಫಾರಮ್, ಈಥರ್ ಮುಂತಾದವುಗಳ ಮಿತಿಮೀರಿದ ಪರಿಣಾಮದಿಂದಲೂ ಉಸಿರಾಟ ನಿಂತುಹೋಗಬಹುದು.  ಉಸಿರಾಟ ನಿಂತುಹೋದಾಗ ತಿಟ್ಟುಸಿರಿನಲ್ಲಿ ಕಾಣಬರುವ ಅಂತ್ಯಲಕ್ಷಣಗಳೇ ಕಂಡುಬಂದರೂ ಅದನ್ನು ಬೇರೆ ಸ್ಥಿತಿಯಾಗಿಯೇ ಗಣಿಸಿ ಅದಕ್ಕೆ ಶ್ವಾಸಸ್ತಂಭನ (ಏಪ್ನೀಯ) ಎಂದು ಕರೆಯಲಾಗಿದೆ.  ಉಸಿರು ಕಟ್ಟುವ ಅಥವಾ ಉಸಿರು ನಿಂತುಹೋಗುವ ಯಾವ ಪರಿಸ್ಥತಿಯಲ್ಲೇ ಆಗಲಿ ದೇಹದಲ್ಲಿ ತೀವ್ರ ಆಕ್ಸಿಜನ್ ಕೊರತೆ ತೋರುವುದೇ ಅಲ್ಲದೆ ಕಾರ್ಬನ್ ಡೈ ಆಕ್ಸೈಡಿನ ವಿಸರ್ಜನೆ ಆಗದೆ ದೇಹದಲ್ಲಿ ಮತ್ತು ರಕ್ತದಲ್ಲಿ ಅದರ ಪ್ರಮಾಣ ಹೆಚ್ಚುತ್ತದೆ.  ಉಸಿರು ನಿಂತುಹೋದಾಗ ಹೀಗಾಗುವುದು ತ್ವರಿತ.  ಪರಿಣಾಮ ತ್ವರಿತ ಮರಣ.  ಮರಣ ಇಷ್ಟು ತ್ವರಿತವಾಗಿ ಸಂಭವಿಸದಿದ್ದ ಸಂದರ್ಭಗಳಲ್ಲಿ ತಿಟ್ಟಿಸಿರಿನ ಪರಿಣಾಮಗಳನ್ನು ಮೂರು ಹಂತಗಳಾಗಿ ಗುರುತಿಸಬಹುದು.

	ಮೊದಲನೆಯದು ಉಸಿರಾಟ ಅತಿಶಯವಾಗುವ ಹಂತ (ಎಗ್ಸಾಜೆರೇಟೆಡ್ ಬ್ರೀತಿಂಗ್).  ಇಲ್ಲಿ ಎತ್ತಿಕಾಣುವುದು ದೀರ್ಘಶ್ವಾಸ.  ನಿಶ್ವಾಸಕ್ಕಿಂತಲೂ  ಉಚ್ಛ್ವಾಸ ದೀರ್ಘ.  ದೇಹದಲ್ಲಿ ಉದ್ಭವಿಸಿರುವ ಆಕ್ಸಿಜನ್ ಕೊರತೆಯನ್ನು ನೀಗಲು ಬಹುಶಃ ಏರ್ಪಡುವುದಾಗಿರಬಹುದು.ಬಾದರೆ ಈ ಪ್ರವೃತ್ತಿಗೆ ಆಕ್ಸಿಜನ್ ಕೊರತೆ ಕಾರಣವಲ್ಲ.  ವಿಸರ್ಜಿತವಾಗದೆ ದೇಹದಲ್ಲಿ ಉಳಿದುಕೊಳ್ಳುತ್ತಿರುವ ಕಾರ್ಬನ್ ಡೈ ಆಕ್ಸೆಡ್ ಕಾರಣ.  ಇದನ್ನು ಅನೇಕ ಪ್ರಯೋಗಗಳಿಂದ ಖಚಿತಪಡಿಸಲಾಗಿದೆ.  ಬರಬರುತ್ತ ಉಸಿರಾಟ ಜೋರಾಗಿ ಬಲಾತ್ಕಾರದ ಉಸಿರಾಟದಂತೆ (ವೈಯೊಲೆಂಟ್ ಬ್ರೀತಿಂಗ್) ಆಗುತ್ತದೆ.  ಪ್ರಯತ್ನ ಮುಂದುವರಿದು, ಶ್ವಾಸಕ್ರಮಕ್ಕಾಗಿ ಅನುಕೂಲವಾಗುವ ಇತರ ಸ್ನಾಯುಗಳನ್ನೂ ವ್ಯಕ್ತಿ ಬಳಸಿಕೊಳ್ಳಬೇಕಾಗಿ ಬಂದು, ಶ್ರಮ ಹೆಚ್ಚಿ ಉಸಿರಾಡಲು ವ್ಯಕ್ತಿಗೆ ಬಲು ಕಷ್ಟವಾಗುತ್ತದೆ.  ಇದಕ್ಕೆ ಕಟ್ಟುಸಿರು (ಡಿಸ್ನಿಯ) ಎಂದು ಹೆಸರು.  ಉಸಿರಾಡಿ ತೃಪ್ತಿ ಹೊಂದಲು ವ್ಯಕ್ತಿ ಸರ್ವಶಕ್ತಿಯಿಂದ ಹೋರಾಡುವುದು ಈ ಸ್ಥಿತಿಯ ಲಕ್ಷಣ. ಆದರೆ ಪ್ರಯತ್ನ ವಿಫಲವಾಗಿ ತಿಟ್ಟುಸಿರಿನ ಪ್ರಥಮ ಹಂತದ ಅಂತ್ಯವಾಗುತ್ತದೆ.  ಈ ಕಾಲದಲ್ಲಿ ಉಚ್ಛ್ವಾಸಕ್ಕಿಂತ ನಿಶ್ವಾಸದ ಪ್ರಯತ್ನ ಜೋರು.  ದೇಹದಲ್ಲಿ ವ್ಯಕ್ತವಾಗಿರುವ ಕಾರ್ಬನ್ ಡೈ ಆಕ್ಸೈಡಿನ ಆಧಿಕ್ಯವನ್ನು ಕಡಿಮೆ ಮಾಡುವುದು ಮುಖ್ಯ ಎನ್ನಿಸುವುದರಿಂದ ಹೀಗೆ ಎಂದು ತೋರುವುದು.  ದೇಹದಲ್ಲಿ ಶೇಖರಣೆ ಆಗಿರುವ ಕಾರ್ಬನ್ ಡೈ ಆಕ್ಸೈಡೇ ಈ ಘಟ್ಟದಲ್ಲಿ ನಿಶ್ವಾಸಪ್ರಯತ್ನ ಹೆಚ್ಚಾಗುವಂಥ ಪ್ರವೃತ್ತಿಗೆ ಕಾರಣ ಎಂಬುದು ತಿಳಿಯಬಹುದಾದ್ದೇ.  ವ್ಯಕ್ತಿಯ ಮುಖ ಪ್ರಾರಂಭದಲ್ಲಿ ಬಿಳಿಚಿಕೊಂಡಿದ್ದರೂ ಅನಂತರ ನೀಲಿಗಟ್ಟುವುದು. ಕಣ್ಣುಗಳು ಹೊರ ಹೊರಟುಕೊಂಡು ಮುಖದಲ್ಲಿ ಆತಂಕ ವ್ಯಕ್ತವಾಗುವುದು, ಗುಂಡಿಗೆಯ ಮಿಡಿತದ ದರ ಹೆಚ್ಚುವುದು.  ಇವು ತಿಟ್ಟುಸಿರಿನ ಪ್ರಥಮ ಹಂತದ ಲಕ್ಷಣಗಳು.  ಇದರ ಅವಧಿ ಸಾಮಾನ್ಯವಾಗಿ ಕನಿಷ್ಠ ಒಂದು ಮಿನಿಟಿನಷ್ಟು ಸ್ಥಿತಿ ತೀವ್ರತರವಾಗಿಲ್ಲದಿದ್ದರೆ 3-4 ಮಿನಿಟುಗಳಷ್ಟೂ ಇರಬಹುದು.  ಅತಿಶಯ ಉಸಿರಾಟವನ್ನು ಉಂಟುಮಾಡುವ  ಪ್ರವೃತ್ತಿ ಎಷ್ಟೇ ಜೋರಾಗಿರಲಿ ವ್ಯಕ್ತಿಗೆ ಸಾಮಥ್ರ್ಯ ಸಾಲದೆ ಸಹಾಯ ಹಾಗೂ ಚಿಕಿತ್ಸೆ ಒದಗಿದಿದ್ದರೆ ಕೊನೆಗೆ ಜ್ಞಾನ ತಪ್ಪಿಹೋಗುತ್ತದೆ. 

	ತಿಟ್ಟುಸಿರಿನ ಎರಡನೆಯ ಹಂತ ದೇಹಾದ್ಯಂತ ಉಗ್ರ ಕ್ಷೋಭೆ (ಕನ್‍ವಲ್‍ಷನ್).  ಮಿದುಳನ್ನು ಒಳಗೊಂಡು ಪೂರ್ತನರಮಂಡಲ ಉದ್ರೇಕಗೊಳ್ಳುವುದು ಇದಕ್ಕೆ ಕಾರಣ.  ಆಕ್ಸಿಜನ್ನಿನ ಕೊರತೆ ಈ ಘಟ್ಟದಲ್ಲಿ ತಕ್ಕಷ್ಟು ಪರಿಣಾಮಕಾರಿಯಾಗಿ ದೇಹದಲ್ಲಿ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ.  ಉಳಿಕೆಯಾಗಿರುವ ಕಾರ್ಬನ್ ಡೈ ಆಕ್ಸೈಡೂ ಇದರ ಜೊತೆಗೆ ಪ್ರತಿಕ್ರಿಯಾಕಾರವಾಗಿ ಮುಂದುವರಿಯುತ್ತದೆ.  ವಾಸ್ತವವಾಗಿ ನರಮಂಡಲದ ಉದ್ರೇಕಕ್ಕೆ  ಕಾರ್ಬನ್ ಡೈ ಆಕ್ಸೈಡಿನ ಆಧಿಕ್ಯವೇ ಕಾರಣ.  ಮೊದಲ ಹಂತದಲ್ಲಿ ಕಂಡುಬಂದ ನಿಶ್ವಾಸಪ್ರಯತ್ನಾಧಿಕ್ಯ ಈ ಹಂತದಲ್ಲೂ ಮುಂದುವರಿಯುತ್ತದೆ.  ಉಸಿರಾಟದ ಹೋರಾಟದಲ್ಲಿ ದೇಹದ ಎಲ್ಲ ಸ್ನಾಯುಗಳೂ ಭಾಗಗೊಳ್ಳುತ್ತವೆ.  ನಿಶ್ವಾಸ ಕಾಲದಲ್ಲಿ ಶ್ವಾಸಸ್ನಾಯುಗಳ ಅನಿಯತ ಚಲನೆ ಸೆಳವುಗಳು ಈ ಹಂತದ ಲಕ್ಷಣ.  ಕ್ರಮೇಣ ಈ ಕ್ಷೋಭೆ ದೇಹದಲ್ಲೆಲ್ಲ ವ್ಯಾಪಿಸುತ್ತದೆ.  ವ್ಯಕ್ತಿಗೆ ಜ್ಞಾನವಿರುವುದಿಲ್ಲ.  ನೆಟ್ಟಕಣ್ಣಿನಲ್ಲಿ ಪಾಪೆ ಕಿರಿದಾಗಿರುತ್ತದೆ.  ಈ ಹಂತದ ಅವಧಿ ಒಂದು ಮಿನಿಟಿಗಿಂತ ಹೆಚ್ಚಾಗಿರುವುದೇ ಇಲ್ಲ. 

	ತಿಟ್ಟುಸಿರಿನ ಕೊನೆಯ ಹಂತ ಶಕ್ತಿಶೋಷಣೆ ಹಂತ (ಎಗ್ಸಾಶ್ಚನ್).  ಮಿದುಳಿನಲ್ಲಿ ಶ್ವಾಸ ಕ್ರಮಕ್ಕೆ ಸಂಬಂಧಪಟ್ಟ ಭಾಗದ ಕ್ರಿಯೆ ಕುಸಿಯುತ್ತ ಹೋಗುತ್ತದೆ.  ಇದಕ್ಕೆ ಕಾರಣ ಆಕ್ಸಿಜನ್ನಿನ ಕೊರತೆಯಿಂದ ನರಕೋಶಗಳಲ್ಲಿ ಜೈವಿಕವ್ಯಾಪಾರಗಳು ಸ್ಥಗಿತವಾಗುವುದು.  ಉಳಿಕೆಯಾಗಿರುವ  ಕಾರ್ಬನ್ ಡೈ ಆಕ್ಸೈಡಿನ ಪ್ರಭಾವ ಮುಗಿದಂತೆ.  ಶ್ವಾಸಕ್ರಮಕ್ಕಾಗಿ ಹೋರಾಟ ಅಳಿದು ಮೇಲುಸಿರು ಹತ್ತಿ ಹತ್ತಿ ಬರುವಂತಾಗುವುದು.  ಉಚ್ಛ್ವಾಸ ದೇಹವನ್ನು ನೀಳಾಗಿಸಿ ಬಾಯಗಲಿಸಿ ಸಾಧಿಸಿವ ಉರುಬಿನ ಕ್ರಮಾವಾಗಿರುವುದು, ನಿಶ್ವಾಸ ದುರ್ಬಲವಾಗಿ ದೀರ್ಘವಾಗಿರುವುದು.  ಇವು ಈ ಹಂತದ ಲಕ್ಷಣ.  ಇಂಥ ಶ್ವಾಸಕ್ರಮವೂ ಒಂದಾದ ಮೇಲೆ ಒಂದು ತಡವಾಗುತ್ತ, ದುರ್ಬಲವಾಗುತ್ತ ಜರಗುತ್ತಿದ್ದು ಕೊನೆಗೆ ಪೂರ್ಣವಾಗಿ ನಿಂತುಹೋಗುತ್ತದೆ.  ಗುಂಡಿಗೆಯ ಮಿಡಿತ ಇನ್ನೂ ಕೆಲವು ಮಿನಿಟುಗಳು ಮುಂದುವರಿಯುತ್ತದೆ.  ಆದರೆ ಇದೂ ಅನಿಯತ ತಾಳಗತಿಯನ್ನು ತೋರುತ್ತ ದುರ್ಬಲವಾಗುತ್ತ ಬಂದು ಕೊನೆಗೆ ಸ್ಥಗಿತವಾಗುತ್ತದೆ.  ನಿರೀಕ್ಷಿಸಬಹುದಾಗಿಯೇ ನಾಡಿ ಅಕ್ರಮವಾಗಿ ಮಿಡಿಯುತ್ತ ದುರ್ಬಲವಾಗಿ ಕೊನೆಗೆ ನಿಂತೇಹೋಗುವುದು.  ದೇಹದ ಸ್ನಾಯುಗಳೆಲ್ಲ ಸಡಿಲಗೊಂಡು ತಾನಾಗಿಯೇ ಮಲಮೂತ್ರಗಳ ವಿಸರ್ಜನೆ ಆಗುತ್ತದೆ.  ಸಂವೇದನೆ ಪೂರ್ಣವಾಗಿ ನಾಶವಾಗಿರುವುದೂ ಅನೈಚ್ಛಿಕ ಪ್ರತಿಕ್ರಿಯೆಗಳಿಗೆ ಚ್ಯುತಿ ಬಂದಿರುವುದು ವಿಶೇಷ ಲಕ್ಷಣಗಳು.  ಕಣ್ಣುಗುಡ್ಡೆಯನ್ನು ಸ್ಪರ್ಶಿಸಿದರೆ ಎವೆಗಳು ಮಿಟುಕುವುದಿಲ್ಲ.  ನೆಟ್ಟಕಣ್ಣಿನಲ್ಲಿ ಪಾಪೆ ಅಗಲವಾಗಿರುವುದು ಕಂಡುಬರುತ್ತದೆ.  ಈ ಹಂತದ ಗರಿಷ್ಠ ಅವಧಿ 3-4 ಮಿನಿಟುಗಳು.  ಆಕ್ಸಿಜನ್ನಿನ ಅಭಾವದಿಂದ ಮಿದುಳಿನ ಕೇಂದ್ರಗಳು ನಿಷ್ಕ್ರಿಯೆಗೊಳ್ಳುವುದರಿಂದ ಗುಂಡಿಗೆ ಸ್ಥಗಿತವಾಗಿ ಸಾವು ಉಂಟಾಗುತ್ತದೆ.  ರೇಚಕವಾಗಿ ಗುಂಡಿಗೆ ಇನ್ನು ವರ್ತಿಸುವಂತಿಲ್ಲ.  ಆದ್ದರಿಂದ ದೇಹದ ರಕ್ತ ಫುಪ್ಪಸಗಳಲ್ಲಿ, ಗುಂಡಿಗೆಯ ಬಲಭಾಗದಲ್ಲಿ ಮತ್ತು ಸಿರೆಗಳಲ್ಲಿ ಉಳಿದುಕೊಳ್ಳುತ್ತದೆ. ;  ಗುಂಡಿಗೆಯ ಎಡಭಾಗ ಹಾಗೂ ಧಮನಿಗಳಲ್ಲಿ ಸ್ವಲ್ಪವೂ ರಕ್ತವಿರುವುದಿಲ್ಲ. ತಿಟ್ಟುಸಿರಿನಿಂದ ಮೃತರಾದವರ ಶವಪರೀಕ್ಷೆಯಿಂದ ಇದನ್ನು ರುಜುವಾತುಪಡಿಸಲಾಗಿದೆ. 

   	ತಿಟ್ಟುಸಿರಿನಿಂದ ಬಾಧಿತನಾದ ವ್ಯಕ್ತಿಗೆ ಸಹಾಯ ಹಾಗೂ ಚಿಕಿತ್ಸೆಗಳು ಕೂಡಲೇ ಒದಗಬೇಕಾದದ್ದು ವೇದ್ಯ.  ಇವು ಗರಿಷ್ಠ ಎಂದರೆ 2-3 ಮಿನಿಟುಗಳ ಒಳಗಾಗಿ ಒದಗಬೇಕು.  ವ್ಯಕ್ತಿಯನ್ನು ಉಸಿರುಕಟ್ಟಿಕೊಂಸ ಅಥವಾ ಕಟ್ಟಿಕೊಳ್ಳುವ ಸ್ಥಳದಿಂದ ಶುದ್ಧವಾತಾವರಣಕ್ಕೆ ಸಾಗಿಸುವುದು ಪ್ರಥಮ ಅಗತ್ಯ.  ಅನಂತರ ಕೃತಕ ಶ್ವಾಸಕ್ರಮವನ್ನು ಅನುಸರಿಸಿ ವ್ಯಕ್ತಿಯನ್ನು ಚಿಕಿತ್ಸಿಸಬೇಕು.				(ಎಸ್.ಆರ್.ಆರ್)  

	ನವಜಾತ ಶಿಶುವಿನ ತಿಟ್ಟುಸಿರು :  ಬಸುರಿನಲ್ಲಿರುವಾಗಿನ ತಾಯಿಯ ಬೇನೆಗಳು, ಕಷ್ಟದ ಹೆರಿಗೆ ಹೆರಿಗೆಯಲ್ಲಿ ತಾಯಿಗೆ ಕೊಡುವ ಮಾರ್ಫೀನ್ ಮೊದಲಾದ ಕೆಲವು ಮದ್ದುಗಳು ಇದರ ಕಾರಣಗಳು.  ಇದರಲ್ಲಿ ಎರಡು ಬಗೆಗಳಿವೆ ನೀಲಿ ತಿಟ್ಟುಸಿರು ಮತ್ತು ಬಿಳಿ ತಿಟ್ಟುಸಿರು. ನೀಲಿ ತಿಟ್ಟುಸಿರು ಅಷ್ಟು ಅಪಾಯಕರವಲ್ಲ, ಕೂಸು ತಲೆ ಕೈಕಾಲುಗಳನ್ನು ಆಡಿಸಬಿಡದು.  ಸ್ನಾಯುಗಳ ಬಿಗಿತ ಹೆಚ್ಚಾಗಿರುತ್ತದೆ.  ಬಿಳಿ ತಿಟ್ಟುಸಿರು. ಅಪಾಯಕರ, ಕೂರಾದದ್ದು.  ಕೂಸು ಬೆಳ್ಳಗೆ ಬಿಳಿಚಿಕೊಂಡು ಉಸಿರೂ ನಿಂತುಹೋಗಿ ಅಲುಗಾಡದೆ ಬಿದ್ದಿರುತ್ತದೆ.  ಇವೆರಡರ ನಡುವಣ ಸ್ಥಿತಿಯೂ ಒಂದುಂಟು. 

	ನಿವಾರಣೆಯ ಮುಖ್ಯಕ್ರಮಗಳು :  ಬಸುರಿಯ ಆರೋಗ್ಯ ರಕ್ಷಣೆ,. ಹೆರಿಗೆಯಲ್ಲಿ ಮದ್ದುಗಳು ಎಚ್ಚರದ ಬಳಕೆ, ಹೆರಿಗೆಯನ್ನು ಸರಿಯಾಗಿ ಮಾಡಿಸುವಿಕೆ, ಚಿಕಿತ್ಸೆಯಲ್ಲಿ ಈ ಕೂಸನ್ನು ಆದಷ್ಟು ಕಡಿಮೆಯಾಗಿ ಮೆಲ್ಲಗೆ ಮುಟ್ಟಬೇಕು.  ಹೊರಗಿನ ಕೊಳಕು ಒಳಸೇರದಂತೆ ಮತ್ತು ಉಸಿರಾಟ ಮೇಲಿನ ಸಾಗುನಾಳಗಳಿಂದ ಸರಿ ಆಗುವಂತೆ ಕೂಸನ್ನು ಸರಿಯಾದ ಇರವಿನಲ್ಲಿ ಬೆಚ್ಚಗಿರಿಸಬೇಕು.  ಉಸಿರಾಡಲು ಅಡಚಣೆ ಇರದಂತೆ ನೋಡಿಕೊಳ್ಳಬೇಕು.  ಆಕ್ಸಿಜನ್ನನ್ನೂ ಕೃತಕ ಉಸಿರಾಟವನ್ನೂ ಕೊಡಬೇಕಾಗಬಹುದು. 						     (ವಿ.ಸಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ